ಕಡಲ ನಿಂಬೆ : ಒಪಿಸ್ತೊಬ್ರಾಂಕಿಯ ಗಣದ ಡೋರಿಡೀ ಕುಟುಂಬಕ್ಕೆ ಸೇರಿದ ಜಠರಪಾದಿ ಮೃದ್ವಂಗಿಗಳ ಒಂದು ಜಾತಿ (ಸೀ ಲೆಮನ್). ವೈಜ್ಞಾನಿಕ ನಾಮ ಡೋರಿಸ್. ಕಡಲತೀರಗಳಲ್ಲಿ ಬಂಡೆಗಳ ಸಂದುಗಳಲ್ಲಿ ಮತ್ತು ಅವುಗಳ ಕೆಳಗೆ ವಾಸಿಸುತ್ತದೆ.  ನಿಂಬೆಹಣ್ಣಿನ ಆಕಾರ ಹಾಗೂ ಬಣ್ಣದ ದೇಹವಿರುವುದರಿಂದ ಇದಕ್ಕೆ ಈ ಹೆಸರು ಬಂದಿದೆ.  ಇದರಲ್ಲಿ ಜಠರಪಾದಿಗಳ ವಿಶಿಷ್ಟ ಲಕ್ಷಣವಾದ ಚಿಪ್ಪು ಸಂಪುರ್ಣವಾಗಿ ನಶಿಸಿಹೋಗಿರುವುದರಿಂದ ಇದು ನಗ್ನದೇಹಿಯಾಗಿದೆ. ದೇಹದ ತುದಿಯಲ್ಲಿ ಒಂದು ಜೊತೆ ಚಿಕ್ಕ ಸ್ಪರ್ಶಕಗಳಿವೆ. ತಲೆಯ ಮೇಲೆ ಒಂದು ಜೊತೆ ಎಲೆಯ ರೂಪದ ಘ್ರಾಣೇಂದ್ರಿಯಗಳಿವೆ (ರೈನೋಫೋರು). ಗುದದ್ವಾರ ದೇಹದ ಬೆನ್ನಿನ ಭಾಗದಲ್ಲಿದೆ. ಇದರ ಸುತ್ತ ಎಲೆಯಾಕಾರದ ತೆಳುವಾದ ಕಿವಿರುಗಳಿವೆ. ಶ್ವಸನಕಾರ್ಯದಲ್ಲಿ. ಸಹಕಾರಿಯಾಗಿರುವ ಇವನ್ನು ಗುದದ ಕಿವಿರುಗಳೆನ್ನುತ್ತಾರೆ. ಕಡಲ ನಿಂಬೆ ಮಾಂಸಾಹಾರಿ.  ಕಠಿಣಚರ್ಮಿಗಳೇ ಇದರ ಮುಖ್ಯ ಆಹಾರ. ತನ್ನ ಮೊಟ್ಟೆಗಳನ್ನು ಒಂದು ಬಗೆಯ ಜಿಲಿಟಿನ್ನಿನಂಥ ವಸ್ತುವಿನಿಂದಾದ ಚೀಲದಲ್ಲಿ ತುಂಬಿ ಸಮುದ್ರದ ಜೊಂಡುಗಳಿಗೆ ಇದು ಅಂಟಿಸಿಡುತ್ತದೆ. ಒಂದೊಂದು ಚೀಲದಲ್ಲಿ ಸು. 6 ಲಕ್ಷ ಮೊಟ್ಟೆಗಳಿರಬಹುದೆಂದು ಚಾಲ್ರ್ಸ್‌ ಡಾರ್ವಿನ್ ಎಣಿಕೆ ಹಾಕಿದ್ದಾನೆ. 	(ಬಿ.ಎನ್.ಬಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ